25/03/2018
*!! ಶ್ರೀ ರಾಮ ನವಮೀ !!*
*! ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇಧಸೇ !*
*! ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ !*
*ರಾಮ ನವಮೀ ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಯಾವುದು ಇಲ್ಲ, ಇದು ಸರಳವಾದ ಹಬ್ಬ.*
*ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. "ರಾಮ" "ಶ್ರೀ ರಾಮ" "ಶ್ರೀ ರಾಮ ಜಯ ರಾಮ" "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಇತ್ಯಾದಿ.*
*ಈ ರೀತಿಯಾಗಿ ನಾವು ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯ ಬೇಕು ಎಂದು ಹಿರಿಯರು ಹೇಳುತ್ತಾರೆ. ವಿಶೇಷವಾಗಿ ಮಕ್ಕಳೂ ಇದನ್ನು ಬರೆದರೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಅವರಿಗೆ ಸಹಕಾರಿಯಾಗಲಿದೆ.*
*ಉದಯಿಸುತ್ತಿರುವ ಸೂರ್ಯನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಹಬ್ಬದ ದಿನ ಪ್ರಾರಂಭಗೊಳ್ಳುತ್ತದೆ. ರಾಮ ದೇವರ ಪೂರ್ವಜರು ಎಂದು ಸೂರ್ಯ ದೇವರನ್ನು ನಂಬುತ್ತಾರೆ. ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ರಾಮನವಮಿಯಂದು ಮುಖ್ಯವಾಗಿರುತ್ತದೆ. ರಾಮ ದೇವರ ಸ್ತೋತ್ರಗಳು, ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯವನ್ನು ನಾವು ಈ ದಿನ ಮಾಡಬೇಕು.*
*ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಿಸುತ್ತಾರೆ. ಆದರೆ ದಕ್ಷಿಣದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿಯೂ ರಾಮ ನವಮಿಯನ್ನು ಆಚರಿಸುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ.*
*!! ಜೈ ಶ್ರೀ ರಾಮ !!*