19/06/2020
'ಸಾರಸ್ವತ ಸಾನ್ನಿಧ್ಯ'ದ ನೂರನೆಯ ಲೇಖನ- ಶ್ರೀವಿಶ್ವಪ್ರಸನ್ನ ತೀರ್ಥರು
'ನಾನಾ ಜನಸ್ಯ ಶುಶ್ರೂಷಾ ಕರ್ಮಾಖ್ಯಾ ಕರವನ್ಮಿತೇ' ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಗೀತಾತಾತ್ಪರ್ಯದಲ್ಲಿ ನೀಡಿದ ಸಂದೇಶವನ್ನು ಶಿರೋಧಾರ್ಯವಾಗಿರಿಸಿಕೊಂಡು. ತಮ್ಮ ಬದುಕನ್ನೇ ಶ್ರೀಮಧ್ವಸಿದ್ಧಾಂತದ ಭಾಷ್ಯವನ್ನಾಗಿಸಿಕೊಂಡು ಬದುಕಿದ ಯತಿವರ್ಯ ಶ್ರೀವಿಶ್ವೇಶತೀರ್ಥರು. ಅಂತಹ ಶಕಪುರುಷ ಸಮಾಜಕ್ಕೆ ನೀಡಿದ ಕೊಡುಗೆಗಳು ಅನೇಕ. ಪೂರ್ಣಪ್ರಜ್ಞವಿದ್ಯಾಪೀಠದ ಸ್ಥಾಪನೆ, ಸರ್ವಮೂಲಗ್ರಂಥಗಳ ಕನ್ನಡ ಅನುವಾದ, ಅಖಿಲ ಭಾರತ ಮಾಧ್ವಮಹಾಮಂಡಲದ ಸ್ಥಾಪನೆ, ಅಸಂಖ್ಯವಿದ್ವಾಂಸರನ್ನು ಸಿದ್ಧಗೊಳಿಸಿ, ಅವರ ಮೂಲಕ ಪೂರ್ಣಪ್ರಜ್ಞ ಸಿದ್ಧಾಂತದ ಪ್ರಸರಣ, ಸನಾತನಧರ್ಮಸಂರಕ್ಷಣೆ ಹೀಗೆ ಅವರು ನೀಡಿದ ಕೊಡುಗೆಗಳು ಅಸಂಖ್ಯ. ಶ್ರೀವಿಶ್ವೇಶತೀರ್ಥ ಶ್ರೀಮಚ್ಚರಣರು ನಾಡಿಗೆ ನೀಡಿದ ಕೊಡುಗೆಗಳಲ್ಲಿ ಮೂರ್ಧನ್ಯವೆಂದರೆ ಅವರ ಉತ್ತರಾಧಿಕಾರಿ ಶ್ರೀವಿಶ್ವಪ್ರಸನ್ನತೀರ್ಥರು. ಅಧುನಾ ಪೇಜಾವರ ಅಧೋಕ್ಷಜ ಮಠಾಧೀಶರಾಗಿರುವ ಶ್ರೀವಿಶ್ವಪ್ರಸನ್ನತೀರ್ಥರು ಗೋಸಂರಕ್ಷಣೆಯಲ್ಲಿ, ಪ್ರಕೃತಿ ಸಂರಕ್ಷಣೆಯಲ್ಲಿ ತೋರುತ್ತಿರುವ ಆಸ್ಥೆ ಅನ್ಯಾದೃಶ. 1964ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯ ಸಮೀಪದ ಪಕ್ಷಿಕೆರೆ ಯಲ್ಲಿ ಶ್ರೀಕೃಷ್ಣಭಟ್ಟರು ಹಾಗೂ ಶ್ರೀಮತಿ ಯಮುನಮ್ಮನವರ ಪುಣ್ಯಗರ್ಭದಲ್ಲಿ ಜನಿಸಿದ ಶ್ರೀವಿಶ್ವಪ್ರಸನ್ನತೀರ್ಥರ ಪೂರ್ವಾಶ್ರಮದ ಹೆಸರು ಶ್ರೀದೇವೀದಾಸಭಟ್ಟರು. ಅದಮಾರು ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ನಡೆಸಿದ ಶ್ರೀಗಳು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತಕಾಲೇಜಿನಲ್ಲಿ ವೇದಾಂತವನ್ನು ಅಭ್ಯಸಿಸಿದರು. ಉಡುಪಿಯ ಪೂರ್ಣಪ್ರಜ್ಞ ಸಂಜೆ ಕಾಲೇಜಿನಲ್ಲಿ ಸ್ನಾತಕಪದವಿಯನ್ನೂ ಪಡೆದಿರುವ ಶ್ರೀಗಳು ಶ್ರೀಕಾಪು ಹಯಗ್ರೀವಾಚಾರ್ಯರು ಸೇರಿದಂತೆ ಅನೇಕ ವಿದ್ವಾಂಸರಲ್ಲಿ ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. 1988ರಲ್ಲಿ ವಿಶ್ವಮಾನ್ಯಯತಿ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು ಶ್ರೀದೇವಿದಾಸಭಟ್ಟರಿಗೆ ಶ್ರೀವಿಶ್ವಪ್ರಸನ್ನತೀರ್ಥರೆಂಬ ಆಶ್ರಮನಾಮದೊಂದಿಗೆ ಸಂನ್ಯಾಸನೀಡಿಶ್ರೀ ಪೇಜಾವರ ಅಧೋಕ್ಷಜಮಠದ ಉತ್ತರಾಧಿಕಾರಿಗಳನ್ನಾಗಿ ನಿಯೋಜಿಸಿದರು. ಸಂನ್ಯಾಸ ಸ್ವೀಕಾರದ ದಿನದಿಂದ ನಿರಂತರ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀವಿಶ್ವಪ್ರಸನ್ನತೀರ್ಥರು ಉಡುಪಿಯ ಮಹಾವಿದ್ವಾಂಸರಲ್ಲೊಬ್ಬರಾದ ಶ್ರೀ ಕಾಪುಹಯಗ್ರೀವಾಚಾರ್ಯರೇ ಮೊದಲಾದ ವಿದ್ವಾಂಸರಲ್ಲಿ ವೇದಗಳನ್ನು ಅಭ್ಯಸಿಸಿ ಚತುರ್ವೇದಗಳಲ್ಲಿ ಪಾರಂಗತರಾದರು. ಮಾತ್ರವಲ್ಲದೆ ಶ್ರೀಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥರೇ ಮೊದಲಾಗಿ ಅನೇಕ ಜನ ಜಿಜ್ಞಾಸುಗಳಿಗೆ ವೇದಪಾಠವನ್ನು ಸಹಾ ಮಾಡುತ್ತಿದ್ದಾರೆ. ಕನ್ನಡ, ತುಳು,ಸಂಸ್ಕೃತ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು ಬಲ್ಲ ಶ್ರೀಗಳು ಅಸೇತು ಹಿಮಾಚಲ ಭರತವರ್ಷವನ್ನು ಪಾದಯಾತ್ರೆಯಲ್ಲಿಯೇ ಸಂಚರಿಸಿದ ಶ್ರೀಗಳ ಪ್ರಕೃತಿ ಪ್ರೀತಿಯೂ ಅನುಪಮ. ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥಶ್ರೀಪಾದರ ನೆರಳಾಗಿ, ಅವರ ಎಲ್ಲಾ ಕಾರ್ಯಗಳಲ್ಲಿ ಬೆನ್ನೆಲುಬಾಗಿ, ಅವರ ಪಾಠ ಪ್ರವಚನಗಳಲ್ಲಿ ಸಹಕಾರ ನೀಡುತ್ತಾ ಒಬ್ಬ ಮಾದರಿ ಶಿಷ್ಯ ಹೇಗಿರಬೇಕು ಎಂಬುದನ್ನು ಜಗತ್ತಿಗೆ ತೋರುವಂತೆ ಬಾಳುತ್ತಿರುವ ಶ್ರೀವಿಶ್ವಪ್ರಸನ್ನತೀರ್ಥರ ಗುರುಭಕ್ತಿ ಅಸದೃಶ. ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು ಐತಿಹಾಸಿಕ ಪಂಚಮ ಪರ್ಯಾಯ ಪೀಠವನ್ನು ಆರೋಹಣಮಾಡುವ ಪೂರ್ವದಲ್ಲಿ ತಮ್ಮ ಶಿಷ್ಯರಾದ ಶ್ರೀವಿಶ್ವಪ್ರಸನ್ನತೀರ್ಥರೇ ಸರ್ವಜ್ಞಪೀಠಾರೋಹಣ ಮಾಡಬೇಕೆಂದು ಎಷ್ಟು ಒತ್ತಾಯ ಮಾಡಿದರೂ, ಅದಕ್ಕೆ ಒಪ್ಪದೆ ಶ್ರೀಕೃಷ್ಣ,ಮಧ್ವ,ವಾದಿರಾಜರ ಕೃಪೆಯಿಂದ ತಮ್ಮ ಗುರುಗಳಿಗೆ ಒದಗಿ ಬಂದ ಐತಿಹಾಸಿಕ ಪಂಚಮಪೀಠವನ್ನು ಆರೋಹಣಮಾಡುವ ಸಂದರ್ಭವನ್ನು ಆನಂದತುಂದಿಲರಾಗಿ ಸಂಭ್ರಮಿಸಿದರು. ಸ್ವಾರ್ಥ, ಅಧಿಕಾರಲಾಲಸೆಗಳೇ ತುಂಬಿರುವ ಈ ಸಮಾಜದಲ್ಲಿ ಗುರುಗಳೇ ಒತ್ತಾಯಮಾಡಿದರೂ ಪರ್ಯಾಯಪೀಠವನ್ನು ಏರದೆ ತಮ್ಮ ವ್ಯಕ್ತಿತ್ವದ ಮಹತಿಯನ್ನು ಮೆರೆದ ಮಹನೀಯರು ಶ್ರೀವಿಶ್ವಪ್ರಸನ್ನತೀರ್ಥರು. ಶ್ರೀವಿಶ್ವಪ್ರಸನ್ನತೀರ್ಥರ ಮತ್ತೊಂದು ಅಪೂರ್ವಸಾಧನೆಯೆಂದರೆ ನೀಲಾವರದಲ್ಲಿ ಗೋಶಾಲೆಯ ಸ್ಥಾಪನೆ. 2000ಕ್ಕೂ ಹೆಚ್ಚಿನ ಅಶಕ್ತಗೋವುಗಳು ಇಲ್ಲಿ ಆಶ್ರಯವನ್ನು ಪಡೆದಿದ್ದು, ಕಟುಕರ ಕೈಯಲ್ಲಿ ಸಿಲುಕಿ ತಮ್ಮ ಅಸುವನ್ನು ಕಳೆದುಕೊಳ್ಳಬೇಕಾಗಿದ್ದ ಎಷ್ಟೋ ಗೊಡ್ಡು,ಅಶಕ್ತ,ವಯಸ್ಸಾದಂತಹ ಹಸುಗಳು ಶ್ರೀವಿಶ್ವಪ್ರಸನ್ನತೀರ್ಥರ ಸಂರಕ್ಷಣೆಯುಲ್ಲಿ ಸುರಕ್ಷಿತವಾಗಿವೆ. ಇಲ್ಲಿ ಹೈನುಗಾರಿಕೆ ಉದ್ಯಮವಾಗಿಲ್ಲ, ಹಸುಗಳಿಂದ ದೊರೆಯುವ 20 ರಿಂದ 30 ಲೀ ಹಾಲು ಅತಿಥಿ,ಸತ್ಕಾರಕ್ಕೆ, ದೇವರ ಪೂಜಾದಿಗಳಿಗೆ ಮಾತ್ರವೇ ಸಾಕಾಗುವಷ್ಟು.ಪ್ರತಿನಿತ್ಯ ಸುಮಾರು ಐವತ್ತು ಸಾವಿರರೂಗಳು ಗೋರಕ್ಷಣೆಗೆ ಅವಶ್ಯವಿದ್ದರೂ,ಸರ್ಕಾರದಿಂದ ನಿರೀಕ್ಷಿತ ಹಣಸಹಾಯ ದೊರೆಯದಿದ್ದರೂ, ಶ್ರೀಗಳು ತಮ್ಮ ಗೋರಕ್ಷಣೆಯ ಕಾರ್ಯದಲ್ಲಿ ಕಿಂಚಿತ್ತೂ ವಿಮುಖರಾಗಿಲ್ಲ. ನೀಲಾವರದ 37 ಎಕರೆ ಜಮೀನಿನಲ್ಲಿ ಸ್ವತ: ಕೃಷಿಕರಾಗಿ ಮೇವನ್ನು ಬೆಳೆದು ಗೋಸಂರಕ್ಷಣೆ ಮಾಡುತ್ತಿರುವ ಶ್ರೀಗಳು ಮಾಧ್ವಯತಿಗಳಲ್ಲಿಯೇ ವಿಶಿಷ್ಟರು. ಕಾಲ್ನಡಿಗೆಯಲ್ಲಿಯೇ ದೇಶಸಂಚಾರಮಾಡಿ, ಪಾದಕಾಣಿಕೆಯಾಗಿ ಭಕ್ತರು ಅರ್ಪಿಸುವ ಕಾಣಿಕೆಯನ್ನೂ ಗೋಸಂರಕ್ಷಣೆಗೆ ಸಮರ್ಪಿಸುತ್ತಿರುವ ಈ ಮಹಾಸಂತ, ನೀಲಾವರದ ಗೋಶಾಲೆಯ ಪರಿಸರದಲ್ಲಿಯೇ ಕಾಳೀಯ ಮರ್ದನ ಶ್ರೀಕೃಷ್ಣನ ದೇಗುಲವನ್ನು ನಿರ್ಮಿಸಿರುವ ಶ್ರೀಗಳು ಬುದ್ಧಿಮಾಂದ್ಯರಿಗಾಗಿ ಶಾಲೆಯೊಂದನ್ನೂ ನಡೆಸುತ್ತಿದ್ದಾರೆ. ಉಡುಪಿಯಲ್ಲಿ ಪ್ರಹ್ಲಾದಗುರುಕುಲವನ್ನೂ ಸಹಾ ನಡೆಸುತ್ತಿರುವ ಶ್ರೀವಿಶ್ವಪ್ರಸನ್ನತೀರ್ಥರಿಗೆ ಪಶು,ಪಕ್ಷಿಗಳ ಪೋಷಣೆಯೆಂದರೆ ಅತೀವ ಪ್ರೇಮ. ಪ್ರಕೃತಿಯ ಬಗ್ಗೆಯೂ ಶ್ರೀಗಳ ಕುತೂಹಲ ಪ್ರೀತಿ ವಿಶೇಷವಾದದ್ದು. ಶ್ರೀಪೇಜಾವರ ಮಠದ ಅಧಿಪತ್ಯದಲ್ಲಿರುವ ಉಡುಪಿಯ ಪ್ರಾಚೀನ ಸ್ಕಂದಾಲಯಗಳಲ್ಲೊಂದಾಗಿರುವ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಇಡೀ ಕರಾವಳಿ ಜಿಲ್ಲೆಗಳಲ್ಲೇ ಅತ್ಯಂತ ಸಮೃದ್ಧವಾದ ಸಸ್ಯ ಸಂಕುಲವನ್ನು ಹೊಂದಿರುವ ತೀರಾ ಅಪರೂಪದ ದೇವಳವನ್ನಾಗಿ ರೂಪಿಸಿದ್ದಾರೆ. ಅನೇಕ ಸಸ್ಯಶಾಸ್ತ್ರಜ್ಞರ ಜತೆಯಲ್ಲಿಯೂ ನಿರಂತರವಾದ ವಿಚಾರ ವಿನಿಮಯಮಾಡುತ್ತಿರುವ ಶ್ರೀಗಳು ಪರಮಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪರಂಧಾಮವನ್ನು ಸೇರಿದನಂತರ ಮುಳಬಾಗಿಲಿನ ಶ್ರೀಪಾದರಾಜರ ದಿವ್ಯಸಾನ್ನಿಧ್ಯದಲ್ಲಿ ಸುಧಾಮಂಗಳವನ್ನು ಗುರುಗಳ ಅನುಪಸ್ಥಿತಿಯಲ್ಲಿ ಮೊದಲಬಾರಿಗೆ ಸುಧಾಮಂಗಳ ನಡೆಸಿದರು. ಶ್ರೀವಿಶ್ವಪ್ರಸನ್ನತೀರ್ಥರ ಬಗ್ಗೆ ಒಂದು ಸಂಗತಿಯನ್ನು ಉಲ್ಲೇಖಿಸಲೇಬೇಕು, ಶ್ರೀಗಳು ಅಸಾಧಾರಣ ಯೋಗ ಪಟುವೂ ಹೌದು. ಶ್ರೀಪೇಜಾವರ ಅಧೋಕ್ಷಜ ಮಠ ನಡೆಸುತ್ತಿರುವ ಶ್ರೀಪೂರ್ಣಪ್ರಜ್ಞವಿದ್ಯಾಪೀಠದವೂ ಸೇರಿದಂತೆ ಎಂಬತ್ತಕ್ಕೂ ಹೆಚ್ಚಿನ ಸಂಸ್ಥೆಗಳ ನಿರ್ವಹಣೆಯನ್ನು ಹೊತ್ತ ಶ್ರೀಗಳು ಜ್ಞಾನ,ಭಕ್ತಿ,ವೈರಾಗ್ಯಗಳು ಮುಪ್ಪುರಿಗೊಂಡು ಮೂರ್ತರೂಪದಂತೆ ನಮ್ಮ ಕಣ್ಣಮುಂದಿರುವ ಯತಿವರೇಣ್ಯರು. ಸಮಸ್ತ ಜೀವರಾಶಿಯಲ್ಲಿಯೂ ಅಂತರ್ಯಾಮಿಯ ಅನುಸಂಧಾನವನ್ನು ಮಾಡಿಕೊಂಡು,ಅವರಿಗೆ ಸಲ್ಲಿಸುವ ಸೇವೆ ಅಂತರ್ಯಾಮಿಯಾದ ಭಗವಂತನಸೇವೆಯೆಂಬ ಮಹತ್ತರ ಸಂದೇಶವನ್ನು ಜಗತ್ತಿಗೆ ನೀಡಿದ ಕ್ರಾಂತದೃಷ್ಟಿಯ ಮಹಾನ್ ಸಂನ್ಯಾಸಿ ಶ್ರೀಮಧ್ವಾಚಾರ್ಯರ ಸಂದೇಶವನ್ನು ತಮ್ಮ ಜೀವಿತದ ಪರಮಧ್ಯೇಯದಂತೆ ಪಾಲಿಸುತ್ತಿರುವ ಪರಿವ್ರಾಜಕ ಶ್ರೀವಿಶ್ವಪ್ರಸನ್ನತೀರ್ಥರಿಗೆ ಪ್ರಸನ್ನನಾಗಿರುವ, ಅವರ ಆರಾಧ್ಯದೈವ ಶ್ರೀರಾಮ-ವಿಠ್ಠಲ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯರ ಮನದಾಳದ ಬಯಕೆ ಶ್ರೀರಾಮಮಂದಿರ ನಿರ್ಮಾಣಕ್ಕೆ ರಚಿತವಾಗಿರುವ ನ್ಯಾಸ (ಟ್ರಸ್ಟ್) ನ ಸದಸ್ಯರಾಗುವ ಭಾಗ್ಯ ಕರುಣಿಸಿದ್ದಾನೆ. ಸಮಗ್ರದಕ್ಷಿಣಭಾರತದಿಂದ ಟ್ರಸ್ಟ್ ನ ಏಕೈಕ ಸಂನ್ಯಾಸಿ ಸದಸ್ಯರಾಗಿರುವ ಶ್ರೀವಿಶ್ವಪ್ರಸನ್ನತೀರ್ಥರು ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥರಂತೆಯೆ ವಿಶ್ವಮಾನ್ಯರಾಗುವಂತೆ ಶ್ರೀಕೃಷ್ಣ,ಪೂರ್ಣಪ್ರಜ್ಞರು ಅನುಗ್ರಹಿಸಲಿ. ಶ್ರೀಕೃಷ್ಣ,ಮಧ್ವರು ಪ್ರೀತರಾಗಲಿ. ವೇಣುಗೋಪಾಲ ಬಿ.ಎನ್.
(ಸಾರಸ್ವತಸಾನ್ನಿಧ್ಯ ಲೇಖನ ಮಾಲಿಕೆಯ ನೂರನೆಯ ಲೇಖನ ಶ್ರೀವಿಶ್ವಪ್ರಸನ್ನತೀರ್ಥರ ಬಗ್ಗೆ ರಚಿತವಾಗುತ್ತಿರುವುದು ಮಹಾಭಾಗ್ಯ)